
ಮೊದಲು ಮದುವೆಯಾದವನು ವೆಂಕ. ಮದುವೆಯ ಮಂಟಪದಲ್ಲಿ ಅವನ ಹೆಂಡತಿಯನ್ನು ಪ್ರಥಮ ಬಾರಿ ನೋಡಿದಾಗ, ಸೀನ ಮತ್ತು ನನಗೆ ಅವಳು ಚೆನ್ನಾಗಿಲ್ಲವೆನ್ನಿಸಿಬಿಟ್ಟಿತು. ನನಗಂತೂ ಅವಳ ಹಲ್ಲುಗಳು ಉಬ್ಬೆನ್ನಿಸಿತು. ಸೀನ ಕೂಡಾ “ಹಲ್ಲೇನೋ ಪರವಾಗಿಲ್ಲ, ಆದರೆ ಸೊಂಟ ದಪ್ಪ” ಅಂತ ಮೂಗು ಹಿಂಡಿದ. ನಾವೆಲ್ಲಾ ಕಂಡ ಕನಸಿನ ಕನ್ಯೆಯರಿಗೂ, ಇವಳಿಗೂ ಹೋಲಿಕೆಯಿಲ್ಲವೆಂದು ಇಬ್ಬರೂ ನಿರ್ಧರಿಸಿದೆವು. ಊಟಕ್ಕೆ ಕುಳಿತಾಗ ಹಾರ-ಬಾಸಿಂಗಗಳ ಸಮೇತ ನಮ್ಮ ಬಳಿ ಬಂದು ವೆಂಕ “ಹೇಗಿದಾಳೋ?” ಅಂತ ಕಳಕಳಿಯಿಂದ ಕೇಳಿದ. “ತುಂಬಾ ಚೆನ್ನಾಗಿದಾಳೆ. ಯು ಆರ್ ಲಕ್ಕಿ....” ಅಂತ ಇಬ್ಬರೂ ಒಟ್ಟಿಗೇ ಹೇಳಿದೆವು. “ಥ್ಯಾಂಕ್ಸ್ ಕಣ್ರೋ.... ನಾಲ್ಕೈದು ಹುಡುಗಿಯರನ್ನ ನೋಡಿದ್ದೆ. ಆದರೆ ಇವಳನ್ನ ನೋಡಿದ ಮೇಲೆ ಬೇರೆ ಹುಡುಗಿಯರನ್ನ ನೋಡಬೇಕು ಅನ್ನಿಸಲೇ ಇಲ್ಲ” ಅಂತ ಹೆಮ್ಮೆಯಿಂದ ಹೇಳಿಕೊಂಡ. ನಾನು, ಸೀನ ಮುಖ ಮುಖ ನೋಡಿಕೊಂಡೆವು.
ಮತ್ತೆ ಆರೇ ತಿಂಗಳಿಗೆ ಸೀನನ ಮದುವೆಯೂ ಆಯಿತು. ವಿಚಿತ್ರವೆಂದರೆ ಅವನ ಹೆಂಡತಿಯೂ ನನಗೆ ಚೆನ್ನಾಗಿಲ್ಲವೆನಿಸಿತು. ಮೂಗು ಸ್ವಲ್ಪ ಮೊಂಡು! ವೆಂಕನಂತೂ “ಹೋಗಿ ಹೋಗಿ ಟೆನ್ನೀಸ್ ಕೋರ್ಟನ ಮದುವೆಯಾಗಿದಾನಲ್ಲೋ! ಎಂಥಾ ’ಖರಾಬ್’ ಟೇಸ್ಟ್ ಮಾರಾಯ.... ಕಡೇ ಪಕ್ಷ ನನ್ನನಾದರೂ ಒಂದು ಮಾತು ಕೇಳಬಹುದಿತ್ತಲ್ಲ” ಅಂತ ಪೇಚಾಡಿದ. ನಮ್ಮ ಗೊಣಗಾಟವೇನೇ ಇದ್ದರೂ, ಸೀನ ಬಳಿ ಬಂದಾಗ “ಯು ಆರ್ ಲಕ್ಕಿ” ಅಂತ ಕೈ ಕುಲುಕಿದೆವು. ಸೀನ ನನ್ನೊಬ್ಬನನ್ನೇ ಪಕ್ಕಕ್ಕೆ ಕರೆದು “ವೆಂಕನ ತರಹ ಹಾರಿಬಲ್ ಆಯ್ಕೆ ನಂದಲ್ಲ, ಅಲ್ವೇನೋ?” ಅಂತ ಕೇಳಿದ. “ನೊ, ನೊ....” ಅಂತ ನಾನವನನ್ನು ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.
ನಾನಂತೂ ಹುಡುಗಿಯ ಆಯ್ಕೆಯಲ್ಲಿ ತುಂಬಾ ಜಾಗರೂಕನಾಗಿದ್ದೆ. ಉಬ್ಬು, ಹಲ್ಲು, ದಪ್ಪ, ಸೊಂಟ, ಮೊಂಡು ಮೂಗು...ಯಾವುದೂ ಇಲ್ಲವೆಂದು ಖಾತರಿ ಪಡಿಸಿಕೊಂಡೆ. ಆದರೂ ಮದುವೆಯ ದಿನ ಗೆಳೆಯರೇನನ್ನುವರೋ ಎಂಬ ಆತಂಕದಲ್ಲಿದ್ದೆ. ಪುರೋಹಿತರು, ವೀಡಿಯೋದವರು, ಬಂಧುಬಳಗದವರು ಕಣ್ಣು ತಪ್ಪಿಸಿ ಗೆಳೆಯರ ಬಳಿ ಹೋಗಿ “ಹೇಗಿದಾಳೋ?” ಅಂತ ಉದ್ವೇಗದಲ್ಲಿ ಕೇಳಿದೆ. “ಯು ಆರ್ ಲಕ್ಕಿ....” ಅಂತ ಇಬ್ಬರೂ ನನ್ನ ಕೈ ಕುಲುಕಿದರು. ನನಗೆ ನಂಬಿಕೆಯಾಗಲಿಲ್ಲ. “ಸುಳ್ಳು ಹೇಳಬೇಡ್ರೋ....ನಿಜ ಹೇಳಿ....ನಂಗೇನೂ ಬೇಜಾರಾಗಲ್ಲ” ಅಂತ ಬೇಡಿಕೊಂಡೆ. “ಸುಳ್ಳು ಯಾಕೆ ಹೇಳೋಣ. ನಿಜವಾಗಿಯೂ ನೀನು ಲಕ್ಕಿ...” ಅಂತ ಮತ್ತೊಮ್ಮೆ ನನ್ನ ಕೈ ಕುಲುಕಿ, ಒಬ್ಬರಿಗೊಬ್ಬರು ಮುಖ ನೋಡಿಕೊಂಡರು!!!
3 comments:
ಸಕತ್ತಾಗಿದೆ. ಇಂಥಾ ಕಥೆಗಳು ತುಂಬಾ ಸರಳವಾಗಿದ್ರೂ ಮನಸ್ಸನ್ನ ಬಹಳ ಯೋಚಿಸಲಿಕ್ಕೆ ಹಚ್ಚಿಸತ್ವೆ.
Superb dude!!!! Loved that one
chennagide sir:)
Post a Comment